ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್, ಎಲೈಟ್ ಗ್ರೂಪ್ ಸೇರಿದ ಸೂರ್ಯ ಕುಮಾರ್ ಯಾದವ್!

ಕ್ಯಾನ್ ಬೆರಾ: ಪ್ರಬಲ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ನಾಯಕ ಸೂರ್ಯ ಕುಮಾರ್ ಯಾದವ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಆಸ್ಟ್ರೇಲಿಯಾದ ಕ್ಯಾನ್ ಬೆರಾದ ಮನುಕಾ ಓವಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶವಿಲ್ಲದೇ ರದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆರಿಸಿಕೊಂಡಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ 9.4 ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿತ್ತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 14 ಎಸೆತಗಳಲ್ಲಿ 4 ಬೌಂಡರಿ ಸಹಿತ 19 ರನ್ ಗಳಿಸಿ ನಾಥನ್ ಎಲ್ಲಿಸ್ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ ಶುಭ್ ಮನ್ ಗಿಲ್ ಜೊತೆಗೂಡಿದ ನಾಯಕ ಸೂರ್ಯ ಕುಮಾರ್ ಯಾದವ್ 62 ರನ್ ಗಳ ಜೊತೆಯಾಟ ಆಡಿದರು.

ಈ ಪೈಕಿ ಗಿಲ್ 20 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 37 ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ 24 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 39 ರನ್ ಕಲೆಹಾಕಿದ್ದರು. ಭಾರತ ತನ್ನ 10ನೇ ಓವರ್ ಆಡುತ್ತಿದ್ದಾಗ ಜೋರು ಮಳೆ ಬಂದು ಪಂದ್ಯ ಸ್ಥಗಿತವಾಗುವಂತೆ ಮಾಡಿತು.